ಯುರಾನಿನೈಟ್	 - 
 	ಕಪ್ಪು. ಕಂದುಕಪ್ಪು ಇಲ್ಲವೆ ಗಾಢಕಂದುಬಣ್ಣದ, ವಿಕಿರಣಪಟುತ್ವ ಇರುವ ಖನಿಜ (Uಔ2). ಸಮಾಂಗೀಯ ಸ್ಫಟಿಕರಚನೆ ಇದೆ. ಜರ್ಮನಿಯ ಹೈನ್ರಿಕ್ ಕ್ಲ್ಯಾಪ್‍ವರ್ತ್ ಎಂಬ ಭೂವಿಜ್ಞಾನಿ ಪಿಚ್‍ಬ್ಲೆಂಡ್ ಎಂಬ ಖನಿಜದಲ್ಲಿ, ಸ್ಫುಟ ಹರಳುಗಳ ರೂಪದಲ್ಲಿ ಇದ್ದ ಈ ಖನಿಜವನ್ನು ಪ್ರತ್ಯೇಕಿಸಿ (1789), ಖಗೋಳವಿಜ್ಞಾನಿ ವಿಲಿಯಮ್ ಹರ್ಷಲ್ ಎಂಬವನಿಂದ ಆವಿಷ್ಕಾರಗೊಂಡ (1781) ಯುರೇನಸ್ ಗ್ರಹದ ಗೌರವಾರ್ಥ ಈ ಹೊಸ ಖನಿಜಕ್ಕೆ ಯುರಾನಿನೈಟ್ ಎಂದು ನಾಮಕರಣಮಾಡಿದ. ಕೋರಾಸೈಟ್, ಅಲ್‍ರಿಚೈಟ್ ಎಂಬ ಹೆಸರುಗಳೂ ಇವೆ.
	ಸಾಮಾನ್ಯವಾಗಿ ಯುರೇನಿಯಮ್ ಡೈಆಕ್ಸೈಡ್ ಸಂಯೋಜನೆ ಹೊಂದಿರುವಂಥ ಖನಿಜ ದೊರೆಯುವುದು ವಿರಳ. ಉತ್ಕರ್ಷಣೆಗೊಂಡು U3ಔ8 ಜೊತೆಯಲ್ಲೂ ಇರುವುದುಂಟು. ಇದರ ಹರಳುಗಳಲ್ಲಿ ಥೋರಿಯಮ್, ರೇಡಿಯಮ್, ಸೆರಿಯಮ್ ಮತ್ತು ಯೆಟ್ರೆಯಮ್ ಲೋಹಗಳ ಹಾಗೂ ಸೀಸದ ಕಲ್ಮಷಗಳಿರುತ್ತವೆ. ಹರಳುಗಳು ಸಮಾಂಗೀಯ ಷಣ್ಮುಖಗಳ ರೂಪದಲ್ಲೊ ಅಷ್ಟಮುಖಗಳ ರೂಪದಲ್ಲೊ ರೂಪುಗೊಳ್ಳುತ್ತವೆ. ಹನ್ನೆರಡು ಮುಖಗಳಿರುವ ಹರಳುಗಳು ಬಲು ವಿರಳ.

	ಈ ಖನಿಜ ಸ್ವರೂಪದಲ್ಲಿ ಮುದ್ದೆಯಂತೆಯೊ ದ್ರಾಕ್ಷಿಗೊಂಚಲಿನಂತೆಯೊ ಇಲ್ಲವೆ ಕಣಗಳಂತೆಯೊ ಕೆಲವೊಮ್ಮೆ ಸ್ತಂಭಾಕೃತಿಯಂತೆಯೊ ಇರುತ್ತದೆ. ಬಾಗಿದ ಪದರಗಳಂತೆಯೂ ಕಾಣಿಸಿಕೊಳ್ಳಬಹುದು. ಬೂದು, ಹಸುರು ಇಲ್ಲವೆ ಕಂದು ಬಣ್ಣದ ಖನಿಜ ಬಲು ಪೆಡಸು. ಕಾಠಿಣ್ಯಾಂಕ 5.5-6 (ಮ್ಹೊ ಮಾನಕ); ಸಾಪೇಕ್ಷ ಸಾಂದ್ರತೆ 9-9.7.

	ಯುರಾನಿನೈಟ್ ನಿಕ್ಷೇಪಗಳು ಗ್ರ್ಯಾನೈಟಿನ ಶಿಲಾರಸಕ್ಕೆ ಸಂಬಂಧಿಸಿದ ಜಲೋಷ್ಣದ್ರಾವಣಗಳಿಂದ ರೂಪುಗೊಂಡ ಸಿರಗಳಾಗಿ ಬೊಹೀಮಿಯದ ಜೋಕಿಮ್ ಸ್ಥಾಲ್, ಕಟಾಂಗದ ಶಿಂತೊಲಾಬ್ವೆ, ಕೆನಡದ ಗ್ರೇಟ್ ಬೇರ್ ಲೇಕ್ ಮತ್ತು ಆಸ್ಟ್ರೇಲಿಯದ ರಮ್ ಜಂಗಲ್ ಪ್ರದೇಶ ಮೊದಲಾದೆಡೆಗಳಲ್ಲಿ ಕಾಣಬರುತ್ತವೆ. ಪೆಗ್ಮಟೈಟ್ ಶಿಲೆಗಳ ರೂಪದಲ್ಲಿ ಪ್ರಪಂಚದ ಬಹುತೇಕ ಪ್ರದೇಶಗಳಲ್ಲೂ ಭಾರತದ ಬಿಹಾರ ರಾಜ್ಯದ ಗಯಾ ಜಿಲ್ಲೆಯ ಪಿಚ್ಚಲಿಯಲ್ಲಿಯೂ ರಾಜಸ್ತಾನ ರಾಜ್ಯದ ಬಿಸುಂಡಿನಿಯಲ್ಲೂ ವ್ಯಾಪಿಸಿಕೊಂಡಿವೆ. ಕೆಲವೊಮ್ಮೆ ಚಿನ್ನದ ಜೊತೆಯಲ್ಲೂ (ದಕ್ಷಿಣ ಆಫ್ರಿಕ) ತಾಮ್ರದ ಜೊತೆಯಲ್ಲೂ (ಅಮೆರಿಕ ಸಂಯುಕ್ತ ಸಂಸ್ಥಾನ, ಕಾಂಗೋ, ಬಿಹಾರ) ದೊರೆಯುವುದುಂಟು. ಅಮೆರಿಕ ಸಂಯುಕ್ತ ಸಂಸ್ಥಾನ ಕೊಲರಾಡೋ ಪ್ರಸ್ಥಭೂಮಿ ಮತ್ತು ವ್ಯೋಮಿಂಗ್ ಪ್ರದೇಶಗಳಲ್ಲಿಯ ಅಂತರ್ಜಲ ಚಲನೆಯ ಸಹಾಯದಿಂದ, ಜಲಶಿಲೆಗಳಾಗಿರುವ ಮರಳುಶಿಲೆಗಳಲ್ಲೂ ಯಥೇಚ್ಛವಾಗಿ ದೊರೆಯುತ್ತದೆ.

	ಪರಮಾಣುಶಕ್ತಿಯ ಉತ್ಪಾದನೆಯಲ್ಲಿ ಬಳಸುವ ಯುರೇನಿಯಮ್ ಲೋಹದ ಉದ್ಧರಣೆಗೆ ಇದು ಪ್ರಮುಖ ಅದುರು.                                                
(ಸಿ.ಎಸ್.ಎನ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ